ಜಗ್ಗಯ್ಯಪೇಟ
ಆಂಧ್ರ ಪ್ರದೇಶದ ಪ್ರಮುಖ ಬೌದ್ಧವಾಸ್ತುಶಿಲ್ಪ ನೆಲೆಗಳಲ್ಲೊಂದು. ಅಮರಾವತಿಗೆ 48 ಕಿ.ಮೀ. ದೂರದಲ್ಲಿದೆ. ಕೃಷ್ಣಾದ ಉಪನದಿಯಾದ ಪಾಲೇರ್‍ನ ದಂಡೆಯ ಮೇಲಿದೆ. ಇಂದು ಇದು ಸಣ್ಣ ಗ್ರಾಮವಾಗಿದ್ದರೂ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಒಂದು ಪ್ರಮುಖ ಸ್ಥಳವಾಗಿತ್ತು. ಜಗ್ಗಯ್ಯಪೇಟದ ಬೌದ್ಧ ಅವಶೇಷಗಳನ್ನು 1882ರಲ್ಲಿ ಜೇಮ್ಸ್‍ಬರ್ಗೆಸ್ ಬೆಳಕಿಗೆ ತಂದ. ಅಷ್ಟು ಹೊತ್ತಿಗಾಗಲೇ ಜನಗಳು ಅಲ್ಲಿದ್ದ ಪ್ರಾಚೀನ ಇಟ್ಟಿಗೆಗಳನ್ನು ಮನೆ ಕಟ್ಟುವುದಕ್ಕಾಗಿ ಉಪಯೋಗಿಸಿಕೊಂಡು ಸ್ತೂಪ ಮತ್ತು ಚೈತ್ಯಗೃಹಗಳನ್ನು ಹಾಳುಮಾಡಿದ್ದರು. ಬರ್ಗೆಸ್ ಮತ್ತು ಅಲೆಗ್ಸಾಂಡರ್ ರೀ ಉಳಿದ ಅವಶೇಷಗಳನ್ನು ರಕ್ಷಿಸಿ, ಮಿಕ್ಕೆಡೆಗಳಲ್ಲಿ ಉತ್ಖನನಗಳನ್ನು ನಡೆಸಿದರು. ಇವರ ಪ್ರಯತ್ನಗಳ ಫಲವಾಗಿ ಜಗ್ಗಯ್ಯಪೇಟದ ಬೌದ್ಧ ಕಲಾವಿಶೇಷಗಳ ಬಗ್ಗೆ ವಿಶೇಷ ಮಾಹಿತಿ ದೊರಕಿದೆ.

ವೆಲ್ಲಗಿರಿ ಎಂಬುದು ಜಗ್ಗಯ್ಯಪೇಟದ ಪ್ರಾಚೀನ ಹೆಸರು. ಇಲ್ಲಿ ದೊರಕಿರುವ ಬೌದ್ಧ ಅವಶೇಷಗಳು ವಿಶೇಷವಾಗಿ ಹೀನಯಾನಧರ್ಮಕ್ಕೆ ಸಂಬಂಧಪಟ್ಟವು. ಕ್ರಿ.ಪೂ. 1ನೆಯ ಶತಮಾನದಿಂದ ಕ್ರಿ.ಶ. 6ನೆಯ ಶತಮಾನದವರೆಗೆ ಈ ಸ್ಥಳ ಮುಖ್ಯ ಬೌದ್ಧ ಕೇಂದ್ರವಾಗಿತ್ತು.

ಇಲ್ಲಿಯ ಸ್ತೂಪವೊಂದು ವ್ಯಾಸವುಳ್ಳದ್ದಾಗಿತ್ತು. ಅದು ಇಟ್ಟಿಗೆ ಮತ್ತು ಮಣ್ಣಿನಿಂದ ನಿರ್ಮಾಣವಾಗಿತ್ತು. ಅಮರಾವತಿಯ ಸ್ತೂಪದಂತೆಯೇ ಅದರ ಹೊರಮೈಯನ್ನು ಮುಚ್ಚಲು ಸುಣ್ಣಕಲ್ಲಿನ ಶಿಲ್ಪಿತ ಫಲಕಗಳನ್ನು ಬಳಸಲಾಗಿತ್ತು. ಸ್ತೂಪದ ಸುತ್ತಲೂ ಇದ್ದ ಕಟಕಟೆ ಈಗ ಉಳಿದುಬಂದಿಲ್ಲ. ಸುಮಾರು  ಅಗಲದ, ಹೀನಯಾನಧರ್ಮಕ್ಕೆ ಸಂಬಂಧಿಸಿದ, ಈ ಶಿಲ್ಪಗಳು ಅತ್ಯಂತ ಪ್ರಾಚೀನವಾದವು. ಬಾರ್ಹೃತ್‍ನ ಶಿಲ್ಪದ ಅನೇಕ ಲಕ್ಷಣಗಳೂ ಇಲ್ಲೂ ಕಾಣಬರುತ್ತವೆ. ಇಲ್ಲಿಯ ಕೆಲವು ಶಿಲ್ಪಗಳಲ್ಲಿ ಆ ಕಾಲದ ಬ್ರಾಹ್ಮೀ ಲಿಪಿಯ ಬರಹಗಳಿವೆ.

ಈ ಸ್ತೂಪಕ್ಕೆ ಸಮೀಪದಲ್ಲಿ 160' ಉದ್ದ 120' ಅಗಲದ ಒಂದು ವಿಹಾರವತ್ತೆಂಬುದು ಅಲ್ಲಿ ಈಗ ಉಳಿದಿರುವ ಕಂಬಗಳಿಂದ ತಿಳಿದುಬರುತ್ತದೆ. ಈ ಕಂಬಗಳ ಮೇಲೆ ಅಲಂಕಾರಿಕ ಚಿಹ್ನೆಗಳು ಮತ್ತು ಯಕ್ಷ, ಯಕ್ಷಿಣಿಯರ ಶಿಲ್ಪಗಳುಂಟು. ಸ್ವಲ್ಪಕಾಲಾನಂತರ ಮಹಾಯಾನ ಬೌದ್ಧಧರ್ಮ ಇಲ್ಲಿಗೂ ಹಬ್ಬಿತು. ಇಕ್ಷ್ವಾಕು ವಂಶದ ರಾಜರು ಇಲ್ಲೂ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಇಲ್ಲಿಯ ಆಯಕ ಕಂಬಗಳ ಮೇಲೆ ದೊರೆತಿರುವ, ಪುರುಷದತ್ತನೇ ಮೊದಲಾದ ರಾಜರ ಶಾಸನಗಳು ಈ ಅಂಶವನ್ನು ಸ್ಪಷ್ಟಪಡಿಸುತ್ತವೆ. ಬುದ್ಧನ ವಿಗ್ರಹವನ್ನೊಳಗೊಂಡ, ಅನೇಕ ಬೌದ್ಧ ಜಾತಕಥೆಗಳ ಶಿಲ್ಪ ಫಲಕಗಳು ನಾಗಾರ್ಜುನಕೊಂಡದ ಶಿಲ್ಪಗಳನ್ನು ಹೋಲುತ್ತವೆ. ಅಮರಾವತಿ ಮತ್ತು ನಾಗಾರ್ಜುನಕೊಂಡದ ಶಿಲ್ಪಗಳಂತೆ ಜಗ್ಗಯ್ಯಪೇಟದ ಶಿಲ್ಪದಲ್ಲೂ ಕಮಲದ ಹೂವು, ಸ್ತ್ರೀ, ವೃಕ್ಷಗಳು ಮುಂತಾದವು ಬಹು ಚೆನ್ನಾಗಿ ರೂಪಿತವಾಗಿವೆ. ಸಮಕಾಲೀನ ಸಾಮಾಜಿಕ ದೃಶ್ಯಗಳ ಸುಂದರ ನಿರೂಪಣೆಯನ್ನಿಲ್ಲಿ ಕಾಣಬಹುದು.							(ಎ.ವಿ.ಎನ್)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ